ಪಿರಾಂಡೆಲೊ, ಲೂಯಿಜಿ
1867-1936. ಇಟಲಿಯ ನಾಟಕಕಾರ, ಸಣ್ಣ ಕತೆಗಾರ ಮತ್ತು ಕಾದಂಬರಿಕಾರ. ಹುಟ್ಟಿದ್ದು ಸಿಸಿಲಿ ದ್ವೀಪದ ಇತಿಹಾಸ ಪ್ರಸಿದ್ಧವಾದ ಗಿರ್ಜೆಂಟಿ ಎಂಬ ಸುಂದರ ಊರಿನಲ್ಲಿ. ತಂದೆ ಸ್ಟಿಫ್ಯಾನೊ. ಗಣಿ ಮಾಲಿಕ. ಶ್ರೀಮಂತ. ಇನ್ನೂ ಮಧ್ಯ ಯುಗದ ಅನಾಗರಿಕ ಪುಂಡಾಟಿಕೆಯ ರೀತಿನೀತಿಗಳನ್ನೇ ಅನುಸರಿಸುತ್ತಿದ್ದ. ಆ ಪ್ರದೇಶದ ಮಾಫಿಯಾ ಗುಪ್ತ ಡಕಾಯಿತರ ಗುಂಪಿನ ಬೆದರಿಕೆಗಳಿಗೆ ತನ್ನ ತೋಳು ಬಲದಿಂದಲೇ (ಅದೊಂದೇ ಅವರಿಗೆ ಅರ್ಥವಾಗುತ್ತಿದ್ದುದು) ಉತ್ತರಿಸುತ್ತಿದ್ದ ಆಜಾನುಬಾಹು, ಧೈರ್ಯಶಾಲಿ. ತಾಯಿ ಕ್ಯಾತರಿನಾ ಬಹು ಮೆದುವಾದ ಮತ್ತು ಪುಕ್ಕಲು ಸ್ವಭಾವದವಳು. ಒಳ್ಳೆಯ ಗೃಹಿಣಿ. ನಿಷ್ಕಪಟತೆ, ಸೂಕ್ಷ್ಮವಾದ ಮನಸ್ಸು, ಔದಾರ್ಯ ಮುಂತಾದವು ತಾಯಿಯಿಂದ ಲೂಯಿಜಿಗೆ ಬಂದ ಗುಣಗಳು. 

ಲೂಯಿಜಿ 16 ನೆಯ ವಯಸ್ಸಿಗೆ ಸರಳವಾದ ನೇರವಾದ ಭಾಷೆಯಲ್ಲಿ ಕವನ ರಚಿಸತೊಡಗಿದ. ರೋಮ್ ವಿಶ್ವವಿದ್ಯಾನಿಲಯವನ್ನು ಪ್ರವೇಶಿಸಿ ಹಳೆಯ ಕಂದಾಚಾರ, ಕಟ್ಟುಪಾಡುಗಳ ಅಧ್ಯಾಪಕರ ವಿರುದ್ಧ ಬಂಡೆದ್ದ. ಭಾಷಾಶಾಸ್ತ್ರದ ಪ್ರಾಧ್ಯಾಪಕ ಎಮಿಲಿಯೊ ಲೂಯಿಜಿಗೆ ಅಚ್ಚುಮೆಚ್ಚೆನ್ನಿಸಿ ಅವರ ಪ್ರಭಾವ-ಪ್ರೇರಣೆಗಳಿಂದಾಗಿ ಸಿಸಿಲಿಯ ಜನಪದ ಸಾಹಿತ್ಯ ಸಂಪದ ಮತ್ತು ಐತಿಹಾಸಿಕ ಘನತೆಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ. ಜರ್ಮನಿಯ ಬಾನ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದ ವಿಶೇಷ ವ್ಯಾಸಂಗ ಮಾಡಿ 1891 ರಲ್ಲಿ ಗಿರ್ಜೆಂಟಿಯ ಪ್ರಾದೇಶಿಕ ಭಾಷೆ-ಒಂದು ಅಧ್ಯಯನ ಎಂಬ ವಿದ್ವತ್ ಪ್ರಬಂಧ ಬರೆದು ಡಾಕ್ಟರೇಟ್ ಪ್ರಶಸ್ತಿಯನ್ನು ಪಡೆದ. ಅದೇ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಭಾಷಾಶಾಸ್ತ್ರದ ಉಪ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ. ಆ ವೇಳೆಗೆ ಮಾಲ್‍ಜಿಯೊಕೊಂಡೊ ಮತ್ತು ಪಾಸ್ಕ್ ಡಿ ಜಿಯ ಎಂಬೆರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದ. ಅವಕ್ಕಿಂತ ಮುಖ್ಯವಾಗಿ ಅತ್ಯಂತ ಕಠಿಣ ಕಾರ್ಯವೆನ್ನಬಹುದಾದ ಗಯಟೆ ಕವಿಯ ರೋಮನ್ ಎಲಿಜೀಸ್ ಎಂಬ ಕೃತಿಯ ಭಾಷಾಂತರವನ್ನು ಬಹು ಸಮರ್ಥವಾಗಿ ಪ್ರತಿಭಾಪೂರ್ಣವಾಗಿ ಮಾಡಿದ.

1893ರ ಅನಂತರ ಸಾಹಿತ್ಯ ವಿಮರ್ಶಕ ಯುಗೊಮ್ ಒಜೆಟ್ಟಿ. ಕಾದಂಬರಿಕಾರ ಲೂಯಿಜಿ ಕ್ಯಾಪುವಾನ್ ಈ ಇಬ್ಬರ ಸ್ನೇಹ ಲೂಯಿಜಿಯ ಜೀವನಕ್ಕೆ ಹೊಸ ತಿರುವು ಕೊಟ್ಟಿತು. ಕಾವ್ಯ ಮಾಧ್ಯಮ ಬಿಟ್ಟು ಗದ್ಯ ಮಾಧ್ಯಮಕ್ಕೆ ತನ್ನ ಒಲವನ್ನು ಬದಲಾಯಿಸಿದ. ಅದರ ಫಲ ಸಣ್ಣ ಕತೆಗಳ ಪ್ರಥಮ ಸಂಕಲನ ಅಮೋರಿ ಸೆಂಜಾ ಆಮೋರಿ (ಲವ್ ವಿದೌಟ್ ಲವ್ 1893), ಈತನ ಶ್ರೇಷ್ಠ ಕೃತಿಗಳಲ್ಲಿ ಒಂದು ಎಂದು ಪರಿಗಣಿತವಾಗಿರುವ ದಿ ಔಟ್‍ಕಾಸ್ಟ್ ಎಂಬ ಕಾದಂಬರಿ ಮತ್ತು ಇಲ್-ಟರ್ನೋ ಎಂಬ ಇನ್ನೊಂದು ಕಾದಂಬರಿ. ಸಿಸಿಲಿಯ ಬದುಕನ್ನು ಸಾಹಿತ್ಯದಲ್ಲಿ ಹಿಡಿದಿಟ್ಟ ಕ್ಯಾಪುವಾನ (ಲೂಯಿಜಿಯ ಮಿತ್ರ) ಮತ್ತು ಜಗದ್ವಿಖ್ಯಾತ ಕಾದಂಬರಿಕಾರ ಗಿವೋನಿ ವೆರ್ಗಾ ಇವರ ಗಾಢವಾದ ಪ್ರಭಾವಕ್ಕೆ ಲೇಖಕ ಒಳಗಾಗಿರುವುದು ಈ ಕಾದಂಬರಿಗಳಲ್ಲಿ ಸ್ಪಷ್ಟವಾಗಿದೆ. ತಾನು ಕಂಡುಂಡ ಬದುಕಿನ ನೈಜ ಹಾಗೂ ಪ್ರಾಮಾಣಿಕ ನಿರೂಪಣೆ, ಅಂತರಂಗಾವಲೋಕನ, ಮನೋವಿಶ್ಲೇಷಣೆ ಮತ್ತು ಪ್ರಾದೇಶಿಕತೆ ಲೂಯಿಜಿಯ ಸಾಹಿತ್ಯ ಕೃತಿಗಳ ಗುಣ ವಿಶೇಷಗಳು. ಕೇವಲ ಕಟುವಾದ ಅನುಭವಗಳೇ ಹೆಚ್ಚಾಗಿದ್ದುದರಿಂದ ಈತನ ಜೀವನ ದೃಷ್ಟಿಯಲ್ಲಿ ಒಂದು ಬಗೆಯ ನೈರಾಶ್ಯ, ಸಿನಿಕತನ ಬೆರೆತುಕೊಂಡಿವೆ. 

ಲೂಯಿಜಿ 1894 ರಲ್ಲಿ ಆಂಟೋನಿಯೆಟ್ಟಾ ಎಂಬಾಕೆಯನ್ನು ಮದುವೆಯಾದ. ಮುಂದಿನ ಹತ್ತು ವರ್ಷ ಅತ್ಯಂತ ಸುಖಮಯವಾಗಿ ಕಳೆಯಿತು. ಮೂವರು ಮಕ್ಕಳಾದರು. 1904 ರಲ್ಲಿ ತಂದೆಯ ಉದ್ಯಮದಲ್ಲಿ ಅಪಾರ ನಷ್ಟವಾಗಿ ಇಡೀ ಸಂಸಾರ ದುರ್ಗತಿಗೊಳಗಾಯಿತು. ಲೂಯಿಜಿ ರೋಮ್ ನಗರದ ಮಹಿಳಾ ಟ್ರೇನಿಂಗ್ ಕಾಲೇಜಿನಲ್ಲಿ ಸಾಹಿತ್ಯದ ಅಧ್ಯಾಪಕನಾಗಿದ್ದ. ಇದ್ದಕ್ಕಿದ್ದಂತೆ ಬಂದೆರಗಿದ ಕಷ್ಟ ತಾಳಲಾರದೆ ಹೆಂಡತಿ ಉನ್ಮಾದ ರೋಗಕ್ಕೆ ಒಳಗಾಗಿ 1918 ರಲ್ಲಿ ಮೃತಳಾದಳು. 

ಇಟಲಿಯ ಓದುಗರು ಲೂಯಿಜಿಯ ಪ್ರತಿಭೇಯನ್ನು ಗುರುತಿಸದೆ ಅವನ ಬರವಣಿಗೆಯ ಬಗ್ಗೆ ಉದಾಸೀನರಾಗಿಯೇ ಇದ್ದರು. 1918 ರ ವೇಳೆಗೆ ವಿದೇಶದ ಜನ ಈತನ ಬರಹವನ್ನು ಮೆಚ್ಚಿ ಹೊಗಳತೊಡಗಿದ ಮೇಲೆ ದೇಶೀಯರ ಕಣ್ತೆರೆಯಿತು. ಆ ವೇಳೆಗೆ ಲೂಯಿಜಿ ತನ್ನ ಅತ್ಯುತ್ಕøಷ್ಟ ಕಾದಂಬರಿಗಳನ್ನು ಬರೆದು ಮುಗಿಸಿದ್ದ. ಅವನ ನೂರಾರು ಸಣ್ಣ ಕತೆಗಳು ಮೂರು ಸಂಪುಟಗಳಲ್ಲಿ ಪ್ರಕಟವಾಗಿದ್ದವು. ನಾಟಕ ರಚನೆಯ ಭವ್ಯವಾದ ಕಾಲ ಮೊದಲಾಗಿ ಅದೇ ಎರಡು ವರ್ಷಗಳಾಗಿದ್ದುವು. ಮೊಟ್ಟಮೊದಲ ನಾಟಕ ರೈಟ್ ಯೂ ಆರ್ ಇಫ್ ಯು ತಿಂಕ್ ಯೂ ಆರ್, 1946 ರಲ್ಲಿ ಮೊದಲ ಪ್ರದರ್ಶನದಲ್ಲೇ ಯಶಸ್ವಿಯಾಗಿ ಯೂರೋಪಿನಲ್ಲೆಲ್ಲ ಪ್ರದರ್ಶನಗಳೇರ್ಪಟ್ಟು ಜಯಭೇರಿ ಬಾರಿಸಿತು.

ಲೂಯಿಜಿ ತನ್ನ ಬಾಳಿನ ಕಹಿ ಅನುಭವಗಳಿಂದಲೇ ಎತ್ತಿಕೊಂಡ ಅಸೂಯೆ, ವೃದ್ಧಾಪ್ಯ, ಹುಚ್ಚು, ಸಾವು ಮುಂತಾದ ಸಮಸ್ಯೆಗಳನ್ನೇ ನಾಟಕಗಳಲ್ಲಿ ಚರ್ಚಿಸುತ್ತಿದ್ದ. ಆತನ ನಗೆ ಮಾತುಗಳಲ್ಲಿನ ಮಾರ್ಮಿಕತೆ, ವಿಷಾದ, ಅಂತರಾರ್ಥ ಹಾಗೆಯೇ ಕೆಲವು ವಿಕೃತ ಸನ್ನಿವೇಶಗಳು ಜನರ ಮನಸ್ಸನ್ನು ಆಳವಾಗಿ ಕಲಕಿದವು. ನಾಟಕದಿಂದ ನಾಟಕಕ್ಕೆ ವಿಚಾರಗಳು ಪರಿಪಕ್ವವಾಗುತ್ತ ಘನೀಭವಿಸಿದ ಸಿದ್ಧಾಂತಗಳಾದವು. ನಾಟಕಗಳೆಲ್ಲವೂ ತುಂಬಾ ಜನಪ್ರಿಯವಾದವು. ಇರುವಿಕೆಗೂ ತೋರಿಕೆಗೂ ಇರುವ ಘರ್ಷಣೆ ಈ ನಾಟಕಗಳ ಸಾಮಾನ್ಯ ವಸ್ತು. ವ್ಯಕ್ತಿಯ ಹಲವು ಮುಖ (ವಾಡ) ಗಳ ಹಿಂದೆ ಎಲ್ಲೂ ಕಾಣದಾಗಿರುವ ಸತ್ಯ ಮುಖದ ಪೇಚಾಟವನ್ನು ಈ ನಾಟಕಗಳು ಚೆನ್ನಾಗಿ ಅಭಿವ್ಯಕ್ತಿಸಿದವು. 1921 ರಲ್ಲಿ ಲೂಯಿಜಿಯ ಕಲಾಸಿದ್ಧಿ ಶಿಖರ ಮುಟ್ಟಿತು. ನಾಲ್ಕನೇ ಹೆನ್ರಿ, ಸಿಕ್ಸ್ ಕ್ಯಾರೆಕ್ಟರಸ್ಸ್ ಇನ್ ಸರ್ಚ್ ಆಫ್ ಎನ್ ಆತರ್. ಎಂಬೆರಡು ಉತ್ಕøಷ್ಟ ನಾಟಕಗಳು ರಚಿತವಾದ್ದು ಈ ಕಾಲದಲ್ಲಿ ಈತನ ಹೆಸರು ಲೋಕಖ್ಯಾತವಾಯಿತು. 1925 ರಲ್ಲಿ ರಾಷ್ಟ್ರೀಯ ರಂಗಭೂಮಿಯನ್ನು ಸ್ಥಾಪಿಸುವ ಪ್ರಯತ್ನ. ಅದ್ದೂರಿಯ ಆರಂಭೋತ್ಸವದಲ್ಲೇ ಕೊನೆಗೊಂಡಿತು. ಫ್ರೆಂಚ್ ಮತ್ತು ಇಟಲಿ ಸರ್ಕಾರಗಳು ಲೀಜನ್ ಆಫ್ ಆನರ್‍ನ ಸದಸ್ಯತ್ವ, ಕಮ್ಯಾಂಡರ್ ಆಫ್ ದಿ ಕ್ರೌನ್ ಎಂಬ ಪ್ರಶಸ್ತಿಗಳನ್ನಿತ್ತು ಸನ್ಮಾನಿಸಿದವು. ಸರ್ವಾಧಿಕಾರಿ ಮುಸೊಲೀನಿ ಈತನನ್ನು ಹೈ ಕಮ್ಯಾಂಡರ್ ಆಫ್ ಸೇಂಟ್ ಮಾರಿಸ್ ಆಗಿ ನೇಮಕ ಮಾಡಿದ. 1935 ರಲ್ಲಿ ಲೂಯಿಜಿಗೆ ಸಾಹಿತ್ಯದ ನೊಬೆಲ್ ಪಾರಿತೋಷಕ ಬಂತು. 
ತನ್ನ ಆಸ್ತಿ ಪಾಸ್ತಿಗಳನ್ನು ಮೂವರು ಮಕ್ಕಳಲ್ಲಿ ಹಂಚಿ, ಸಂಸಾರದ ಎಲ್ಲ ಮೋಹ, ಬಂಧನಗಳನ್ನೂ ಕಳಚಿಹಾಕಿ ನಿರಂತರ ಪ್ರವಾಸದಲ್ಲಿ ಕಾಲ ಕಳೆಯುತ್ತ, ಬದುಕು ಮರೀಚಿಕೆ ಸಾವೊಂದೇ ಸತ್ಯ ಎಂಬ ನಿಲುವನ್ನು ತಳೆದಿದ್ದ ಲೂಯಿಜಿ ಎದುರು ನೋಡುತ್ತಿದ್ದ ಸಾವು 1936 ರ ಡಿಸೆಂಬರ್‍ನಲ್ಲಿ ಬಂತು. ಆಗ ಈತನಿಗೆ ಎಪ್ಪತ್ತು ವರ್ಷ ವಯಸ್ಸು. ಬದುಕಿನಲ್ಲಿ ಹೇಗೋ ಹಾಗೆ ಸಾವಿನಲ್ಲೂ ನಿರಾಡಂಬರವನ್ನೇ ಬಯಸಿದ ಈತನ ಕೊನೆಯ ಇಚ್ಛೆಯಂತೆ ಅಂತ್ಯಕ್ರಿಯೆ ಅತ್ಯಂತ ಸರಳವಾಗಿ ನೆರವೇರಿತು.
ಕೆಲವು ಕವನ ಸಂಕಲನಗಳು, ಮುನ್ನೂರು ಕಿರು ಕಾದಂಬರಿಗಳು, ಏಳು ಕಾದಂಬರಿಗಳು, ನಲವತ್ತಕ್ಕೂ ಹೆಚ್ಚು ನಾಟಕಗಳು, ವಿಮರ್ಶಾತ್ಮಕ ಗ್ರಂಥಗಳು ಎಂದು ಈತನ ಕೃತಿಗಳನ್ನು ಪಟ್ಟಿ ಮಾಡಿದ್ದಾರೆ. ಈ ಕೃತಿಗಳ ಬಗ್ಗೆ ಮುಖ್ಯವಾಗಿ ಈತನ ವಿಶಿಷ್ಟ ಕಾಣಿಕೆಗಳೆಂದೆನಿಸಿರುವ ನಾಟಕಗಳ ಬಗ್ಗೆ ವಿಮರ್ಶಕರ ಅಭಿಪ್ರಾಯಗಳು ಭಿನ್ನವಾಗಿವೆ. ಈತನ ನಾಟಕಗಳು ವಾಸ್ತವ ಬದುಕಿಗೆ ದೂರ, ಕೇವಲ ಮನೋತುಮುಲ ಭಾವನಾತರಂಗಗಳೀಗೆ ಸೀಮಿತವಾದವು ಎಂದೂ ನಿರಾಶಾವಾದದ ಹೆಬ್ಬಂಡೆಯನ್ನಪ್ಪಳಿಸಿ ಒಡೆದು ಹೋದ ಆದರ್ಶದ ದೋಣಿ ಎಂದೂ ಕೆಲವು ವಿಮರ್ಶಕರು ಹೇಳಿದರೆ ಮತ್ತೆ ಕೆಲವರು ನೀರಸವಾದ, ಶೋಕಮಯವಾದ ಈ ಲೋಕದ ಬದುಕಿಗೂ, ಪರಿಪೂರ್ಣವಾದ ಬದುಕಿನ ಹೊಂಗನಸಿಗೂ ಇರುವ ಅಂತರವನ್ನು ಹೃದಯಂಗಮವಾಗಿ ಇವನ ನಾಟಕಗಳು ಚಿತ್ರಿಸುತ್ತವೆ ಎನ್ನುತ್ತಾರೆ. ಸತ್ಯಕ್ಕೂ, ಭ್ರಮೆಗೂ ಇರುವ ವ್ಯತ್ಯಾಸವನ್ನು ಗುರುತಿಸುವ ಸಾಮಥ್ರ್ಯ ಯಾರಿಗೂ ಇಲ್ಲ. ಅಲ್ಲದೆ, ಪ್ರತಿಯೊಬ್ಬ ಮಾನವನಿಗೂ ಭ್ರಮೆ ಒಂದು ಅನಿವಾರ್ಯವಾದ ಅಗತ್ಯ. ಸತ್ಯಾನ್ವೇಷಣೇ ದುರಂತದಲ್ಲಿ ಪರ್ಯವಸಾನವಾಗುತ್ತದೆ-ಇವು ಲೂಯಿಜಿಯ ನಾಟಕಗಳ ಒಟ್ಟು ಸಂದೇಶ. ಈತನ ನಾಲ್ಕನೇ ಹೆನ್ರಿ ನಾಟಕವನ್ನು ಶೇಕ್ಸ್‍ಪಿಯರನ ಹ್ಯಾಮ್ಲೆಟ್ ನಾಟಕಕ್ಕೆ ಹೋಲಿಸುವುದುಂಟು.

ಈತನ ಕೆಲವು ನಾಟಕಗಳು ಮುವತ್ತುಮೂರು ಭಾಷೆಗಳಿಗೆ ಅನುವಾದವಾಗಿವೆ. 

ಲೂಯಿಜಿ ನಾಟಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳನ್ನು ತಂದ. ವಿರೂಪ ನಾಟಕಗಳ ಮೊದಲಿಗನಾಗಿ ಆಧುನಿಕ ಅಸಂಬದ್ಧ ನಾಟಕದ ಬೀಜ ಬಿತ್ತಿದ. ಮಾನವನ ಬದುಕಿನ ಬಗ್ಗೆ ಮಾಡಿದ ಈತನ ಚಿಂತನ, ವಿಚಾರಮಂಥನ ಅಪೂರ್ವವಾದವು.
(ಕೆ.ಬಿ.ಪಿ.)

	ವಾಸ್ತವತೆಯನ್ನು ಕಡೆಗಣಿಸಿ ಪಿರಾಂಡಲೊ `ಫ್ಯಾಂಟಸಿಯನ್ನು ಬಳಸಿದ. ಇದರ ಮೂಲಕ ಮನುಷ್ಯನ ಸ್ಥಿತಿಯನ್ನು ಅನಾವರಣ ಮಾಡಿದ ಬದುಕಿನ ಅಸಾಂಗತ್ಯ ಮತ್ತು ವಾಸ್ತವ ಹೊರ ತೋರಿಕೆಗಳ ಘರ್ಷಣೆ ಇವನ ನಾಟಕಗಳ ವಸ್ತು ಸಾಮಾನ್ಯವಾಗಿ ಇವನ ಪಾತ್ರಗಳು ಕೆಳಗಿನ ಮಧ್ಯಮ ವರ್ಗಕ್ಕೆ ಸೇರಿದವು- ಉಪಾಧ್ಯಾಯರು, ವಸತಿ ಗೃಹಗಳನ್ನು ನಡೆಸುವವರು, ಗುಮಾಸ್ತರು ಇಂಥವರು. ಸಹಜ ಪ್ರವೃತ್ತಿ, ವಿಚಾರ ಶಕ್ಲತಿ ಇವು ಇವರ ಬದುಕಿನಲ್ಲಿ ಘರ್ಷಿಸುತ್ತವೆ, ಇದರಿಂದ ಇವರ ಬದುಕು ಗೊಂದಲಮಯವಾಗುತ್ತದೆ. ಮನುಷ್ಯನ ವ್ಯಕ್ತಿತ್ವವೆಂದರೆ ಏನು ಎನ್ನುವ ಪ್ರಶ್ನೆ ಏಳುತ್ತದೆ. ಪಾತ್ರಗಳು ತಮ್ಮನ್ನು ಕಾಣುವ ರೀತಿ, ಇತರರು ಅವರನ್ನು ಕಾಣುವ ರೀತಿ, ಇವುಗಳಲ್ಲಿನ ವ್ಯತ್ಯಾಸ, ವಿರೋಧಗಳು ಇವುಗಳಿಂದ ಅವರು ಇನ್ನೂ ಗೊಂದಲದಲ್ಲಿ ಬೀಳುತ್ತಾರೆ. ಈ ಗೊಂದಲದಿಂದ ಒಂದಿಷ್ಟು ಹಾಸ್ಯ ಮೂಡಿದರೂ, ಈ ಹಾಸ್ಯವು ಪಾತ್ರಗಳ ವಿಷಯದಲ್ಲಿ ನಮ್ಮ ಮರಾಕವನ್ನು ಆಳಗೊಳಿಸಿಸುತ್ತವೆ.

	ಪಿರಾಂಡೆಲೊ ಮುಂದೆ ಬಂದ ಅನುಹಿಲ್, ಸಾಫ್ಟ್ ಅಂಥ ನಾಟಕಕಾರರಿಗೆ ಮುನ್ಸೂಚನೆಯಾದ.
											ಪರಿಷ್ಕರಣೆ
										ಎಲ್.ಎಸ್.ಶೇಷಗಿರಿರಾವ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ